ಕ್ವಿಬೆಕ್
ಕೆನಡದ ಅತ್ಯಂತ ದೊಡ್ಡ ಪ್ರಾಂತ್ಯ. ನೈಋತ್ಯ ಮತ್ತು ಪಶ್ಚಿಮಗಳಲ್ಲಿ ಆಂಟೇರಿಯೋ ಪ್ರಾಂತ್ಯ, ಜೇಮ್ಸ್ ಕೊಲ್ಲಿ ಮತ್ತು ಹಡ್ಸನ್ ಕೊಲ್ಲಿ, ಉತ್ತರದಲ್ಲಿ ಹಡ್ಸನ್ ಜಲಸಂಧಿ ಮತ್ತು ಅಂಗೇವ ಕೊಲ್ಲಿ, ಪೂರ್ವದಲ್ಲಿ ಲ್ಯಾಬ್ರಡಾರ್ ತೀರ, ಸೇಂಟ್ ಲಾರೆನ್ಸ್ ಖಾರಿ, ದಕ್ಷಿಣದಲ್ಲಿ ಷಲುರ್ ಕೊಲ್ಲಿ, ನ್ಯೂ ಬ್ರನ್ಸ್‍ವಿಕ್ ಪ್ರಾಂತ್ಯ, ಅಮೆರಿಕ ಸಂಯುಕ್ತಸಂಸ್ಥಾನದ ಮೇನ್, ನ್ಯೂ ಹ್ಯಾಂಪ್‍ಷಿರ್, ವರ್ಮಾಂಟ್, ನ್ಯೂ ಯಾರ್ಕ್ ರಾಜ್ಯಗಳು ಮತ್ತು ಆಂಟೇರಿಯೋ ಪ್ರಾಂತ್ಯ-ಇವು ಕ್ವಿಬೆಕ್‍ನ ಮೇರೆಗಳು. ಉ.ಅ.450-620 30' ಮತ್ತು ಪ.ರೇ.790 30'-570 ನಡುವೆ ಇರುವ ಕ್ವಿಬೆಕ್‍ನ ವಿಸ್ತೀರ್ಣ 5,94,860 ಚ.ಮೈ. ಜನಸಂಖ್ಯೆ 52,59,211 (1961). ರಾಜಧಾನಿ ಕ್ವಿಬೆಕ್.

ಭೌತಲಕ್ಷಣ: ಕ್ವಿಬೆಕನ್ನು ಮೂರು ಸ್ವಾಭಾವಿಕ ವಿಭಾಗಗಳಾಗಿ ವಿಂಗಡಿಸಬಹುದು. ಕ್ವಿಬೆಕ್‍ನ ಸೇ.90ಕ್ಕೂ ಹೆಚ್ಚು ಭಾಗ ಕೆನಡಿಯನ್ ಫಲಕಕ್ಕೆ ಸೇರಿದೆ. ಇದು ಪ್ರಸ್ಥಭೂಮಿಸದೃಶ ಪ್ರದೇಶ. ಇದು ಉತ್ತರಕ್ಕೆ ಇಳಿಜಾರಾಗಿದೆ. ಹಡ್ಸನ್ ಜಲಸಂಧಿಯ ಬಳಿ 1,000' ಆಳದ ಪ್ರಪಾತಗಳು ಸಂಭವಿಸಿವೆ. ವೃಕ್ಷರೇಖೆಯ ದಕ್ಷಿಣದಲ್ಲಿ ವಿಶಾಲ ಪ್ರದೇಶಗಳು ಹಿಮಾನಿಯುಗಕಾಲದ ಶೀಖರಣೆಗಳಿಂದ ಆವೃತವಾದವು. ಹಿಮದ ಶೇಖರಣೆಗಳು ಅಸಮವಾಗಿದ್ದುದರಿಂದಲೂ ಅದರಿಂದ ಸಂಭವಿಸಿದ ನಗ್ನೀಕರಣ ಕಾರ್ಯದಿಂದಾಗಿಯೂ ಕೆನಡಿಯನ್ ಫಲಕ ಪ್ರದೇಶಗಳಲ್ಲಿ ಹರಿಯುವ ನದಿಗಳು ಅನೇಕ ಸರೋವರಗಳಿಂದ ಕೂಡಿ ಅವುಗಳೊಳಕ್ಕೆ ರಭಸದಿಂದ ಧುಮಿಕಿ ಜಲಪಾತಗಳನ್ನು ನಿರ್ಮಿಸಿವೆ. ದಕ್ಷಿಣ ಭಾಗದ ನದಿಗಳು ಹೆಚ್ಚು ಎತ್ತರದ ಪ್ರಸ್ಥಭೂಮಿಯಿಂದ ದಕ್ಷಿಣದ ಆಳದ ಕಮರಿಗಳೊಳಗೆ ಧುಮುಕುತ್ತವೆ. ಇವುಗಳಲ್ಲಿ ಸ್ಯಾಗೆನೇ, ಸೇಂಟ್ ಮಾರಿಸ್, ಆಟ್ಟವ, ಬರ್ಸೀಮೀ, ಪೆರಿಬಾಂಕ, ಊಟಾರ್ಡ್ ಮತ್ತು ಮ್ಯಾನಿಕ್ವಾಗನ್ ನದಿಗಳು ಮುಖ್ಯವಾದವು. ಕೆನಡಿಯನ್ ಫಲಕ ಪ್ರದೇಶದಲ್ಲಿ ಚಿನ್ನ, ತಾಮ್ರ, ಸತು ಮುಂತಾದ ಖನಿಜನಿಕ್ಷೇಪಗಳಿವೆ. ಎರಡನೆಯ ಸ್ವಾಭಾವಿಕ ವಿಭಾಗ ಸೇಂಟ್ ಲಾರೆನ್ಸ್ ನದೀ ಬಯಲು. ಇದು ಕೆನಡಿಯನ್ ಫಲಕಕ್ಕಿಂತ ಭಿನ್ನವಾದ್ದು. ಇದರ ತಲಶಿಲೆಗಳು ಅವಸಾದಿ ಮೂಲದವು. ಸೇಂಟ್ ಲಾರೆನ್ಸ್ ಇಲ್ಲಿಯ ಮುಖ್ಯ ನದಿ. ಆಪಲೇಷಿಯನ್ ಪ್ರಸ್ಥಭೂಮಿ ಮೂರನೆಯ ಸ್ವಾಭಾವಿಕ ವಿಭಾಗ. ಈ ವಿಭಾಗಕ್ಕೆ ಸೇರಿರುವ ಗ್ಯಾಸ್ಟೇ ಪರ್ಯಾಯ ದ್ವೀಪದಲ್ಲಿರುವ ಷಿಕ್‍ಷಾಕ್ ಪರ್ವತದ ಷಾóಕ್ ಕ್ಯಾರ್ಟೇ (4,160') ಕ್ವಿಬೆಕ್ ಪ್ರಾಂತ್ಯದ ಅತ್ಯುನ್ನತ ಶಿಖರ.
ವಾಯುಗುಣ: ಕ್ವಿಬೆಕಿನದು ಖಂಡಾಂತರ ವಾಯುಗುಣ. ಉತ್ತರ ಕ್ವಿಬೆಕಿನ ಮಧ್ಯದಲ್ಲಿ ಬೇಸಗೆಯಿಂದ ಚಳಿಗಾಲಕ್ಕೆ ಉಷ್ಣತೆಯಲ್ಲಿ ಸುಮಾರು 700ಫ್ಯಾ.ನಷ್ಟು ಅಂತರವಿರುತ್ತದೆ. ಮಾಂಟ್ರಿಯಾಲ್‍ನಲ್ಲಿ ಸರಾಸರಿ ಉಷ್ಣತೆ ಜನವರಿಯಲ್ಲಿ 150 ಫ್ಯಾ.; ಜುಲೈಯಲ್ಲಿ 700 ಫ್ಯಾ. ಸೇಂಟ್ ಲಾರೆನ್ಸ್ ಕೊಲ್ಲಿಯಲ್ಲಿ ಸಂಭವಿಸುವ ಕಡಿಮೆ ಒತ್ತಡದ ಆವರ್ತ ಮಾರುತಗಳಿಂದ ಪ್ರಾಂತ್ಯದ ದಕ್ಷಿಣ ಭಾಗದಲ್ಲಿ ಮಳೆಯಾಗುತ್ತದೆ. ವಾರ್ಷಿಕ ಮಳೆ ಉತ್ತರದಲ್ಲಿ 15"; ದಕ್ಷಿಣದ ಎಲ್ಲೆಯ ಬಳಿ 40"ಗೂ ಹೆಚ್ಚು. ಕ್ವಿಬೆಕ್ ನಗರದ ಬೆನ್ನಿನ ಕಡೆಗೆ ಇರುವ ಎತ್ತರದ ಪ್ರಸ್ಥಭೂಮಿಯಲ್ಲಿ ಇಡೀ ಖಂಡದಲ್ಲೇ ಅತ್ಯಧಿಕ ಹಿಮ ಬೀಳುತ್ತದೆ (120").
ಸಸ್ಯಗಳು, ಪ್ರಾಣಿಗಳು: ವೃಕ್ಷರೇಖೆಯ ಉತ್ತರಕ್ಕೆ ಇರುವುದು ತಂಡ್ರ ಪ್ರದೇಶ. ಅದರಿಂದ ದಕ್ಷಿಣಕ್ಕೆ ಬಂದಂತೆ ಸ್ಪ್ರೂಸ್ ಮತ್ತು ತಂಡ್ರ ಮಿಶ್ರಣವೂ ಇನ್ನೂ ದಕ್ಷಿಣಕ್ಕೆ ಉಪಶೀತವಲಯದ ಶಿಲಾವಲ್ಕ ಮತ್ತು ಶಂಕುಧರ ವೃಕ್ಷಗಳೂ ಇವೆ. ಸೇಂಟ್ ಲಾರೆನ್ಸ್ ಮೈದಾನದಲ್ಲಿ ಮಿಶ್ರ ಕಾಡುಗಳುಂಟು. ಪೂರ್ವದ ಪ್ರದೇಶಗಳಲ್ಲೂ ಗ್ಯಾಸ್ಪೇ ಪರ್ಯಾಯದ್ವೀಪದಲ್ಲೂ ಗಟ್ಟಿ ಮರಗಳ ಮತ್ತು ಸಂಮಿಶ್ರ ಜಾತಿಯ ಸಸ್ಯಗಳ ಕಾಡುಗಳಿವೆ. ಕ್ವಿಬೆಕಿನಲ್ಲಿ ವನ್ಯಮೃಗಗಳು ಹೇರಳವಾಗಿ ಉಂಟು. ಕ್ಯಾರಿಬೂ, ಜಿಂಕೆ, ಬೀವರ್, ಮಿಂಕ್ ಮುಂತಾದ ಪ್ರಾಣಿಗಳೂ ಬಗೆಬಗೆಯ ಪಕ್ಷಿಗಳೂ ಟ್ರೌಟ್, ಚಾರ್ ಬ್ಯಾಸ್ ಪೈಕ್, ಪಿಕರೆಲ್ ಸ್ಯಾಲ್ಮನ್ ಮುಂತಾದ ಮೀನುಗಳೂ ಇವೆ. ಕ್ವಿಬೆಕಿನಲ್ಲಿರುವ ಪ್ರಾಂತೀಯ ವನಗಳ ಸಂಖ್ಯೆ ಆರು. ಫೋರ್ಟ್ ಚ್ಯಾಂಬ್ಲಿ, ಫೋರ್ಟ್‍ಲೆನಾಕ್ಸ್ ಇವು ಇತಿಹಾಸಪ್ರಾಮುಖ್ಯವುಳ್ಳ ರಾಷ್ಟ್ರೀಯ ವನಗಳು.
ಆರ್ಥಿಕತೆ: ಕ್ವಿಬೆಕ್ ಪ್ರಾಂತ್ಯದ ದಕ್ಷಿಣದಲ್ಲಿ ಜನಸಾಂದ್ರತೆ ಬೆಳೆಯುವುದಕ್ಕೆ ಇಲ್ಲಿಯ ನೆಲಬೇಸಾಯಕ್ಕೆ ಹೆಚ್ಚು ಅನುಕೂಲವಾಗಿರುವುದೇ ಕಾರಣ. ಸೇಂಟ್ ಲಾರೆನ್ಸ್ ತಗ್ಗಿನ ನೆಲ ಮತ್ತು ಕೆನಡಿಯನ್ ಫಲಕದ ಅಂಚಿನ ಪ್ರದೇಶಕ್ಕೆ ಕೃಷಿ ಸೀಮಿತವಾಗಿದೆ. ಹೈನುಗಾರಿಕೆಯೂ ನಡೆಯುತ್ತದೆ. ಕ್ವಿಬೆಕ್‍ನ ಒಟ್ಟು ನೆಲದ ಶೇಕಡ 4ರಷ್ಟು ಮಾತ್ರ ಕೃಷಿಭೂಮಿಯಾಗಿದ್ದರೂ ವ್ಯವಸಾಯವೇ ಇಲ್ಲಿಯ ಮುಖ್ಯ ಕಸಬಾಗಿತ್ತು. ಒಂದನೆಯ ಮಹಾಯುದ್ಧದಿಂದೀಚೆಗೆ ಇಲ್ಲಿ ವ್ಯವಸಾಯದ ಯಾಂತ್ರೀಕರಣವಾಗಿ, ಎರಡನೆಯ ಮಹಾಯುದ್ಧದಿಂದೀಚೆಗೆ ಕೃಷಿ ಕ್ರಾಂತಿ ಸಂಭವಿಸಿತು. ಆದರೂ ಈಗ ಕೃಷಿಗಿಂತ ಕೈಗಾರಿಕೆ ಹೆಚ್ಚು ಮುಖ್ಯವಾಗಿದೆ. ಗೋಧಿ, ಓಟ್ಸ್, ಬಾರ್ಲಿ, ರೈ, ಬಟಾಣಿ, ತಿಂಗಳುಹುರುಳಿ, ಆಲೂಗೆಡ್ಡೆ, ಒಣಹುಲ್ಲು, ಹೊಗೆಸೊಪ್ಪು, ಸಕ್ಕರೆ ಬೀಟ್, ಹಣ್ಣುಗಳು ಇವು ಮುಖ್ಯ ಉತ್ಪನ್ನಗಳು. 

ಕ್ವಿಬೆಕಿನ ಮೂರನೆಯ ಎರಡಕ್ಕಿಂತ ಹೆಚ್ಚು ಭಾಗ ಕಾಡಿನಿಂದ ಆವೃತವಾಗಿರುವುದರಿಂದ ಇಲ್ಲಿಯ ಅರಣ್ಯೋತ್ಪನ್ನಗಳು ವೈವಿಧ್ಯಪೂರಿತವಾಗಿದೆ. ಸ್ಪ್ರೂಸ್, ಫರ್ ಪೈನ್, ಹೆಮ್ಲಾಕ್, ದೇವದಾರು, ಮೇಪಲ್, ಎಲ್ಮ್, ಆಷ್, ಚೆರಿ, ಓಕ್ ಮುಂತಾದ ಮರಗಳುಂಟು. ತುಪ್ಪುಳುಗಾರಿಕೆ  ಮೀನುಗಾರಿಕೆಗಳೂ ನಡೆಯುತ್ತವೆ.

ಕೈಗಾರಿಕೆಯಲ್ಲಿ ಕ್ವಿಬೆಕ್ ಪ್ರಾಂತ್ಯಕ್ಕೆ ಕೆನಡದಲ್ಲಿ ಎರಡನೆಯ ಸ್ಥಾನ ಲಭ್ಯವಾಗಿದೆ. ಕೆನಡದಲ್ಲಿ ತಯಾರಾಗುವ ಸರಕುಗಳ ಶೇ.30ರಷ್ಟು ಮೌಲ್ಯದ ಸರಕುಗಳು ಕ್ವಿಬೆಕಿನಲ್ಲಿ ಉತ್ಪಾದನೆಯಾಗುತ್ತವೆ. ಕೆನಡಿಯನ್ ಫಲಕದ ದಕ್ಷಿಣ ಭಾಗದಲ್ಲಿ ಧುಮುಕುವ ನದಿಗಳಿಂದ ಉತ್ಪಾದನೆಯಾಗುವ ವಿದ್ಯುಚ್ಛಕ್ತಿಯೇ ಇಲ್ಲಿಯ ಕೈಗಾರಿಕೆಗಳಿಗೆ ಮುಖ್ಯ ಆಧಾರ. ಕೆನಡದ ಬೇರಾವ ಪ್ರಾಂತ್ಯದಲ್ಲೂ ಕ್ವಿಬೆಕಿನಲ್ಲಿ ಉತ್ಪಾದನೆಯಾಗುವಷ್ಟು ವಿದ್ಯುತ್ತಿನ ಉತ್ಪಾದನೆಯಾಗುವುದಿಲ್ಲ. ಪ್ರಾಂತ್ಯದ ಅರಣ್ಯ ಮತ್ತು ಖನಿಜಸಂಪತ್ತು ಮತ್ತು ಸೇಂಟ್ ಲಾರೆನ್ಸ ನೌಕಾ ಸಾರಿಗೆ ಸೌಲಭ್ಯ-ಇವೂ ಕೈಗಾರಿಕೆಯ ಬೆಳವಣಿಗೆಗೆ ಕಾರಣಗಳು. ಕೆನಡಿಯನ್ ಫಲಕದ ಅಂಚಿನಲ್ಲಿ ಹಲವಾರು ಕೈಗಾರಿಕಾ ನಗರಗಳು ಸ್ಥಾಪಿತವಾಗಿವೆ. ಮರ ಕೊಯ್ಯುವುದು, ಮರದ ತಿರುಳು ಮತ್ತು ಕಾಗದ ತಯಾರಿಕೆ, ನೌಕಾನಿರ್ಮಾಣ, ವಿಮಾನ ತಯಾರಿಕೆ, ರಾಸಾಯನಿಕಗಳು, ಹಿತ್ತಾಳೆ ತಾಮ್ರ ಉತ್ಪನ್ನಗಳು, ಅಣಿಕಟ್ಟು, ಪಾದರಕ್ಷೆ, ಔಷಧ ಮುಂತಾದ ಕೈಗಾರಿಕೆಗಳಿವೆ. ಗಣಿಗಾರಿಕೆಯಲ್ಲಿ ಕ್ವಿಬೆಕ್ ಪ್ರಾಂತ್ಯ ದೇಶದಲ್ಲಿ ಎರಡನೆಯ ಸ್ಥಾನ ಪಡೆದಿದೆ. ಕೆನಡದ ಗಣಿ ಉತ್ಪನ್ನದ 1/5 ಭಾಗ ಕ್ವಿಬೆಕಿನದು.

ಸೇಂಟ್ ಲಾರೆನ್ಸಿನಿಂದಾಗಿ ಕ್ವಿಬೆಕಿನ ಮುಖ್ಯ ಬಂದರುಗಳಿಗೆ ಸಾಗರ ಸಂಪರ್ಕ ಸಾಧ್ಯವಾಗಿದೆ. ಮಾಂಟ್ರಿಯಾಲ್ ರೈಲ್ವೆ, ಜಲ ಮತ್ತು ವಾಯುಮಾರ್ಗಗಳ ಮುಖ್ಯ ಸಂಧಿಸ್ಥಳ; ಮುಖ್ಯ ಕೈಗಾರಿಕಾ ಮತ್ತು ಬ್ಯಾಂಕಿಂಗ್ ಕೇಂದ್ರ, ಕೆನಡಿಯನ್ ನ್ಯಾಷನಲ್ ಮತ್ತು ಕೆನಡಿಯನ್ ಫೆಸಿಫಿಕ್ ರೈಲ್ವೆ ಮಾರ್ಗಗಳು ಕ್ವಿಬೆಕ್ ಪ್ರಾಂತ್ಯದ ಮೂಲಕ ಹಾದುಹೋಗುತ್ತವೆ. ಮರದ ತಿರುಳು ಮತ್ತು ಕಾಗದ ತಯಾರಿಕೆ ಸಂಸ್ಥೆಗಳಿಗೆ ಸೇರಿದ ರೈಲು ಮಾರ್ಗಗಳೂ ಉಂಟು.
ಕ್ವಿಬೆಕ್ ಪ್ರಾಂತ್ಯದ ರಾಜಧಾನಿ ಮತ್ತು ಅತ್ಯಂತ ಹಳೆಯ ನಗರ ಕ್ವಿಬೆಕ್. ಇದು ಸೇಂಟ್ ಲಾರೆನ್ಸ್‍ನ ಉತ್ತರ ದಡದ ಮೇಲೆ, ಸೇಂಟ್ ಚಾರಲ್ಸ್ ಕೂಡುವೆಡೆಯಲ್ಲಿ ಸ್ಥಾಪಿತವಾಗಿದೆ. ಕ್ವಿಬೆಕ್ ನಗರವನ್ನು ಮೇಲುನಗರ, ಕೆಳನಗರ ಎಂದು ವಿಭಾಗಿಸಬಹುದು. ಸೇಂಟ್ ಲಾರೆನ್ಸ್‍ನ ಎಡದಂಡೆಯಾಗಿರುವ ಎತ್ತರದ ಪ್ರಸ್ಥಭೂಮಿಯ ಉತ್ತರದ ಕೊನೆಯಲ್ಲಿ ಮೇಲುನಗರವನ್ನು ನಿರ್ಮಿಸಲಾಗಿದೆ. ಇದರ ಸುತ್ತಲೂ ಕೆಳನಗರವಿದೆ. ಕ್ವಿಬೆಕ್ ನಗರದ ವೈಶಿಷ್ಟ್ಯವೆಂದರೆ ಗೋಡೆಗಳ ನಡುವೆ ನಿರ್ಮಿತವಾಗಿರುವ ಭಾಗ. ಈ ಗೋಡೆಯನ್ನೂ ದುರ್ಗವನ್ನೂ 1823-32ರಲ್ಲಿ ಕಟ್ಟಲಾಯಿತು. ಕ್ವಿಬೆಕ್ ಬಹಳ ಕಾಲ ಕೆನಡದ ಅತ್ಯಂತ ಮುಖ್ಯ ಬಂದರಾಗಿತ್ತು. 19ನೆಯ ಶತಮಾನದ ಉತ್ತರಾರ್ಧದಲ್ಲಿ ಸೇಂಟ್ ಲಾರೆನ್ಸ್ ಪಾತ್ರವನ್ನು ಆಳ ಮಾಡಿದ ಮೇಲೆ ಮಾಂಟ್ರಿಯಾಲ್ ಮುಖ್ಯ ಬಂದರಾಯಿತು. ಕ್ವಿಬೆಕಿನಲ್ಲಿ ಅನೇಕ ಕೈಗಾರಿಕೆಗಳಿವೆ. ಕ್ವಿಬೆಕ್ ನಗರಪ್ರದೇಶದ ಜನಸಂಖ್ಯೆ 3,57,568 (1961).

ಹಲ್, ಷವಿನಿಗ್ಯಾನ್, ಆರ್ವೈಡ, ಗ್ರೈನ್‍ಬಿ, ಷರ್‍ಬ್ರುಕ್, ಮೇಗಾನ್ ಇವು ಕ್ವಿಬೆಕಿನ ಇತರ ಕೆಲವು ಕೈಗಾರಿಕಾ ನಗರಗಳು. 										   		 (ಜೆ.ಇ.ಸಿ.)